ಅರ್ಥಕ್ರಿಯಾಕಾರಿತ್ವ

ಸತ್ ಎಂಬ ಪದದ ಸ್ವರೂಪವೆಂಥಾದ್ದು ಎಂಬುದನ್ನು ವಿವರಿಸುವಾಗ ಈ ವಾದ ಬರುತ್ತದೆ. ಈ ಪ್ರಶ್ನೆಗೆ ಸ್ಥೂಲವಾಗಿ ಎರಡು ಬಗೆಯ ಉತ್ತರಗಳಿವೆ. ಹುಟ್ಟು ಸಾವಿಲ್ಲದೆ ಯಾವ ವಿಧವಾದ ಬದಲಾವಣೆಗೂ ಒಳಪಡದೆ ಎಲ್ಲ ಕಾಲಕ್ಕೂ ಸ್ಥಿರವಾಗಿ ಇರುವುದೇ ಸತ್ ಎಂಬುದು ಒಂದು. ಭಾರತದಲ್ಲಿ ವೇದಾಂತಿಗಳು-ಅದರಲ್ಲೂ ಮುಖ್ಯವಾಗಿ ಅದ್ವೈತ ವೇದಾಂತಿಗಳು, ಪಾಶ್ಚಾತ್ಯರಲ್ಲಿ ಪಾರ್ಮನಿಡೀಸ್, ಪ್ಲೇಟೊ, ಹೆಗೆಲ್ ಮೊದಲಾದರು ಈ ರೀತಿಯಾದ ಉತ್ತರ ಕೊಡುತ್ತಾರೆ. ಇದಕ್ಕೆ ಪ್ರತಿಯಾದದ್ದು ಇನ್ನೊಂದು: ಸತ್ ಎಂದರೆ ಸದಾ ಕ್ರಿಯಾಕಾರಿಯಾಗಿರುವುದೇ ವಿನಾ ಏನೂ ಮಾಡದೆ ತಟಸ್ಥವಾಗಿರುವುದು ಸತ್ ಎಂದು ಕರೆಯಿಸಿಕೊಳ್ಳಲು ಯೋಗ್ಯವಲ್ಲ ಎಂಬುದು. ಭಾರತೀಯರು ಮುಖ್ಯವಾಗಿ ಕ್ರಿಯಾಪ್ರಧಾನತತ್ವವನ್ನು ಅನುಸರಿಸುವ ಬೌದ್ಧರೂ ಜೈನರೂ ಪೂರ್ವಮೀಮಾಂಸಕರೂ ಪಾಶ್ಚಾತ್ಯರಲ್ಲಿ ಹೆರಾಕ್ಲಿಟಸ್, ಪೊಟಾಗರಾಸ್, ವಿಲಿಯಂ ಜೇಮ್ಸ್, ಜಾನ್‍ಡ್ಯೂಯಿ, ಎನ್. ಸಿ. ಎಸ್. ಷಿಲ್ಲರ್ ಮೊದಲಾದವರು ಕ್ರಿಯಾಕಾರಿತ್ವ ತತ್ತ್ವವನ್ನು ಎತ್ತಿ ಹಿಡಿದವರು.

ಇವರೆಲ್ಲರೂ ಕ್ರಿಯಾಕಾರಿಯಾಗಿರುವುದೇ ಸತ್ ಎಂದು ಒಪ್ಪಿದರೂ ಸತ್ಯದ ಸ್ವರೂಪ ಮತ್ತು ಪ್ರಮಾಣವೇನು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಹೊರ ವಸ್ತುವಿಗೆ ಸಂವಾದಿಯಾದ ಜ್ಞಾನವೇ ಸತ್ಯದ ಸ್ವರೂಪ ಎಂದು ವಾಸ್ತವವಾದಿಗಳೆಲ್ಲರೂ ಒಪ್ಪುತ್ತಾರೆ. ಬೌದ್ಧರಲ್ಲಿ ವಿಜ್ಞಾನವಾದಿಗಳು ಮಾತ್ರ ಇದನ್ನು ಒಪ್ಪುವುದಿಲ್ಲ. ಫಲಕಾರಿಯಾದುದೇ ಸತ್ಯವೆಂದು ಹೇಳುತ್ತಾರೆ. ವೈಶೇಷಿಕರು ವಾಸ್ತವ ವಾದಿಗಳಾದುದರಿಂದ ಸತ್ಯದ ಸ್ವರೂಪ ಫಲವೆಂದು ಒಪ್ಪುವುದಿಲ್ಲ. ಸಕ್ಕರೆ ಎಂದು ಋಜುವಾತಾಗಬೇಕಾದರೆ ಅದು ನೀರಿನಲ್ಲಿ ಕರಗಬೇಕು, ಬಾಯಲ್ಲಿ ಹಾಕಿಕೊಂಡರೆ ಸಿಹಿಯಾಗಿರಬೇಕು. ಆದ್ದರಿಂದ ಸತ್ಯವನ್ನು ಸ್ಥಾಪಿಸುವುದು ಅದರಿಂದ ಉಂಟಾಗುವ ಫಲದಿಂದ ಎನ್ನುತ್ತಾರೆ. ಇದು ಪಾಶ್ಚಾತ್ಯರ ಕ್ರಿಟಿಕಲ್ ರಿಯಲಿಸ್ಟ್ ಪಂಥದ ವಾದವನ್ನು ಹೋಲುತ್ತದೆ. ಪಾಶ್ಚಾತ್ಯರಲ್ಲಿ ಎಸ್. ಸಿ. ಎಸ್. ಷಿಲ್ಲರ್ ಅಪ್ಪಟ ಫಲವಾದಿ. ಜಾನ್ ಡ್ಯೂಯಿಯ ವಾದ ವೈಜ್ಞಾನಿಕ ಮಾರ್ಗಕ್ಕೆ ಸಂಗತವಾದ ಫಲವಾದ.			  
 (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ